ಆಂಗ್ಲೋ ಸ್ಯಾಕ್ಸನ್ ಕ್ರಾನಿಕಲ್
ಇಂಗ್ಲೆಂಡಿನ ಅರಸ ಆಲ್‍ಫ್ರೆಡ್‍ನಿಂದ ಪ್ರೇರಿತವಾದ ಕೃತಿಗಳಲ್ಲಿ ಅತ್ಯಂತ ಗಣನೀಯವಾದುದು. ಉಪಲಬ್ಧವಾಗಿರುವ ಕೃತಿಗೆ ಹಲವು ಪಾಠಾಂತರಗಳಿವೆ. ಕ್ರಿಸ್ತಶಕದ ಪ್ರಾರಂಭದಿಂದ ಹನ್ನೆರಡನೆಯ ಶತಮಾನದ ಮಧ್ಯಭಾಗದವರೆಗೆ ಇಂಗ್ಲೆಂಡಿನಲ್ಲಿ ನಡೆದ ಮುಖ್ಯ ಘಟನೆಗಳ ನಿರೂಪಣೆ ಇದು; ದೇಶಭಾಷೆಯಲ್ಲಿದೆ. ಇದರ ಬೀಜ ಪಶ್ಚಿಮಸ್ಯಾಕ್ಸನ್ ರಾಜಧಾನಿ ವಿಂಚೆಸ್ಟರಿನದು. ಇದರಲ್ಲಿ ಕೆಲವುಸಾರಿ ಬರುವ ಪ್ರಾಚೀನಕಾಲದ ಪ್ರಸ್ತಾಪ ಕ್ರೈಸ್ತಮತದ ಮನೋಭಾವಕ್ಕಿಂತ ಭಿನ್ನವಾಗಿದೆ. ಕ್ರಿ.ಶ. 892ರವರೆಗಿನ ಭಾಗ ಪ್ರಾಯಶ: ಆಲ್‍ಫ್ರೆಡ್‍ನ ಮಾರ್ಗದರ್ಶನದಲ್ಲಿ ರಚಿತವಾಯಿತು. ಅಲ್ಲಿಂದ ಇನ್ನೂರೈವತ್ತು ವರ್ಷಕಾಲ ಎಂದರೆ ಕೊನೆಯ ಇಂಗ್ಲಿಷ್ ರಾಜ ಸತ್ತು ಒಂದು ಶತಮಾನ ಕಳೆಯುವವರೆಗೂ ಬೆಳೆದುಕೊಂಡು ಬಂತು. ಕೆಲವು ಭಾಗಗಳಲ್ಲಿ-ದಕ್ಷಿಣ ಇಂಗ್ಲೆಂಡಿನಲ್ಲಿ ಡೇನರೂಡನೆ 893--897ರ ವರೆಗೆ ನಡೆದ ಕದನಗಳ ವರದಿಯಲ್ಲಿ ಉತ್ಕøಷ್ಟಸಾಹಿತ್ಯದ ಮಟ್ಟವನ್ನು ಕಾಣಬಹುದು. ಇದು ಇಂಗ್ಲೆಂಡಿನ ವಿಶಿಷ್ಟವೂ ಅಮೂಲ್ಯವೂ ಆದ ಕೃತಿಗಳಲ್ಲಿ ಒಂದು. ಇಂಗ್ಲಿಷ್ ಭಾಷೆಯ ಮೊದಲ ಮಹಾಕೃತಿ. ಪಾಶ್ಚಾತ್ಯ ದೇಶ ಒಂದರಲ್ಲಿ ಅದರ ಭಾಷೆಯಲ್ಲೇ ಬಹುಕಾಲ ನಡೆದುಬಂದ ಮೊದಲ ಚಾರಿತ್ರಿಕ ಕೃತಿ.						
(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ